ಸುಳ್ಯ
	ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಜಿಲ್ಲೆಯ ದಕ್ಷಿಣದಲ್ಲಿ ಕೊನೆಯ ತಾಲ್ಲೂಕಾದ ಇದನ್ನು ಪಶ್ಚಿಮ, ವಾಯವ್ಯ ಮತ್ತು ಉತ್ತರದಲ್ಲಿ ಪುತ್ತೂರು ತಾಲ್ಲೂಕು, ಈಶಾನ್ಯದಲ್ಲಿ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕು ಪೂರ್ವಕ್ಕೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕುಗಳೂ ಪಶ್ಚಿಮ ಮತ್ತು ನೈಋತ್ಯದಲ್ಲಿ ಕೇರಳರಾಜ್ಯ, ದಕ್ಷಿಣ ಮತ್ತು ಆಗ್ನೇಯದಲ್ಲಿ ಮಡಿಕೇರಿ ತಾಲ್ಲೂಕು ಸುತ್ತುವರಿದಿವೆ. ಪುತ್ತೂರು ಉಪವಿಭಾಗಕ್ಕೆ ಸೇರಿದ ಈ ಪ್ರದೇಶವನ್ನು 1965 ಡಿಸೆಂಬರ್ 15 ರಂದು ಪ್ರತ್ಯೇಕಿಸಿ ತಾಲ್ಲೂಕೆಂದು ಗುರುತಿಸಲಾಯಿತು. ಪಂಜ ಮತ್ತು ಸುಳ್ಯ ಹೋಬಳಿಗಳು. 41 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 826.6 ಚ.ಕಿಮೀ. ಜನಸಂಖ್ಯೆ 1,40,722. 

	ತಾಲ್ಲೂಕಿನ ಪೂರ್ವಭಾಗ ಪಶ್ಚಿಮ ಘಟ್ಟ ಶ್ರೇಣಿಗಳಿಂದ ಆವೃತವಾಗಿದ್ದು ಪಶ್ಚಿಮ ಭಾಗ ಘಟ್ಟಶ್ರೇಣಿಯ ಇಳಿಜಾರು ಮತ್ತು ವ್ಯವಸಾಯಯೋಗ್ಯ ಭೂಪ್ರದೇಶದಿಂದ ಕೂಡಿದೆ. ಕುಮಾರಧಾರಾ ಮತ್ತು ಪಯಸ್ವಿನಿ ನದಿ ಈ ತಾಲ್ಲೂಕಿನ ಮುಖ್ಯ ನದಿಗಳು. ಸುಬ್ರಹ್ಮಣ್ಯದ ಬಳಿಯ ಕುಮಾರಪರ್ವತದಿಂದ ಹರಿದು ಬರುವ ಕುಮಾರಧಾರಾ ತಾಲ್ಲೂಕಿನ ಪೂರ್ವದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಹರಿಯುವುದು. ಮುಂದೆ ಪುತ್ತೂರು ತಾಲ್ಲೂಕನ್ನು ಪ್ರವೇಶಿಸಿ ಮತ್ತೆ ತಾಲ್ಲೂಕಿನ ಉತ್ತರದಲ್ಲಿ ಸ್ವಲ್ಪದೂರ ತಾಲ್ಲೂಕು ಗಡಿಯಾಗಿ ಹರಿದು ಪುತ್ತೂರನ್ನು ಪ್ರವೇಶಿಸುವುದು. ಈ ನದಿಗೆ ಅನೇಕ ಸಣ್ಣಪುಟ್ಟ ಹೊಳೆ, ತೊರೆಗಳು ಕೂಡಿಕೊಳ್ಳುವುವು. ಪಯಸ್ವಿನಿ ನದಿ ತಾಲ್ಲೂಕಿನ ದಕ್ಷಿಣದಲ್ಲಿ ಆಗ್ನೇಯ ದಿಂದ ವಾಯವ್ಯಕ್ಕೆ ಹರಿದು ಸುಳ್ಯವನ್ನು ಮುಟ್ಟಿ ಅನಂತರ ಪಶ್ಚಿಮಾಭಿ ಮುಖವಾಗಿ ಹರಿದು ಕೇರಳ ರಾಜ್ಯವನ್ನು ಪ್ರವೇಶಿಸುವುದು. ತಾಲ್ಲೂಕಿನಲ್ಲಿ ಕರಾವಳಿ ಪರ್ವತ ಪ್ರದೇಶದ ವಾಯುಗುಣವಿದ್ದು ಮಲೆನಾಡ ಪ್ರದೇಶಕ್ಕೆ ಸೇರಿದ್ದರೂ ವರ್ಷದ ಹೆಚ್ಚುಕಾಲ ಸೆಕೆಯಿಂದ ಕೂಡಿರುತ್ತದೆ. ವಾರ್ಷಿಕ ಸರಾಸರಿ ಮಳೆ 4,981.7 ಮಿಮೀ. 

	ಈ ತಾಲ್ಲೂಕು ಜಲಸಮೃದ್ಧಿಯೊಂದಿಗೆ ಸಸ್ಯಸಮೃದ್ಧಿಯಿಂದಲೂ ಕೂಡಿದೆ. ಬೆಟ್ಟ, ಕಣಿವೆಗಳಲ್ಲಿ ದಟ್ಟ ಅರಣ್ಯಗಳಿವೆ. 46,626 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು ಸಾಗುವಾನಿ, ಬೀಟೆ, ಮತ್ತಿ, ಜಂಬೆ, ಕಾಡಹಲಸು, ಹುನಗಲು, ನಂದಿ, ಮಾವು, ಕೀರಲಬೋಗಿ ಮುಂತಾದ ಬೆಲೆಬಾಳುವ ಮರಗಳ ಜೊತೆಗೆ ಹುಣಿಸೆ, ರಾಮಪತ್ರೆ, ಅಂಟುವಾಳದಂತಹ ಮರಗಳೂ ಬೊಂಬು, ಬೆತ್ತ, ಬೆಂಕಿಕಡ್ಡಿಗಳಿಗೆ ಬೇಕಾದಂಥ ಮೆದು ತಿರುಳಿನ ಮರಗಳೂ ಬೆಳೆಯುತ್ತವೆ. ರಬ್ಬರ್ ತೋಟಗಳನ್ನೂ ಬೆಳೆಸಿ ವಿಸ್ತರಿಸಲಾಗುತ್ತಿದೆ. 4,390 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ತೋಟವನ್ನು ಬೆಳೆಸಲಾಗಿತ್ತು. 

	ತಾಲ್ಲೂಕಿನ ಹೆಚ್ಚುಭಾಗ ಜಂಬುಮಣ್ಣಿನ ಹೆಚ್ಚು ಮಳೆ ಬೀಳುವ ಪ್ರದೇಶಕ್ಕನುಗುಣವಾಗಿರುವ ಮತ್ತು ಪೂರ್ವದ ಕಡೆ ಬಂಡು ಮಣ್ಣಿನ ಪ್ರದೇಶದಿಂದ ಕೂಡಿದೆ. ಬತ್ತ ಇಲ್ಲಿನ ಮುಖ್ಯ ಬೆಳೆ. ಅಡಕೆ, ತೆಂಗು, ಗೋಡಂಬಿ, ಕೋಕೊ, ವೀಳೆಯದೆಲೆ, ಮೆಣಸು, ಶುಂಠಿ, ಏಲಕ್ಕಿ, ಬಾಳೆ, ಮಾವು, ಮರಗೆಣಸು-ಇವು ವಾಣಿಜ್ಯ ಬೆಳೆಗಳು.

	ವ್ಯವಸಾಯಕ್ಕೆ ಬೇಕಾಗುವ ಎಮ್ಮೆಗಳ ಸಾಕಣೆ ಹೆಚ್ಚು. ಇಲ್ಲಿ ಮಲೆನಾಡ ಗಿಡ್ಡ ಹಸುಗಳಿದ್ದು ಉತ್ತಮ ತಳಿಯ ಹಸುಗಳು ಕಡಿಮೆ. ತಾಲ್ಲೂಕಿನಲ್ಲಿ ಗೃಹಕೈಗಾರಿಕೆಗಳಾದ ಬೀಡಿ ಮತ್ತು ಬಿದಿರು ಬುಟ್ಟಿಗಳ ತಯಾರಿಕೆಯುಂಟು. ಬಿಸಲೆ ಮತ್ತು ಸಂಪಾಜೆ ಘಟ್ಟ ರಸ್ತೆಗಳೇ ಈ ತಾಲ್ಲೂಕಿನ ಪೂರ್ವದ ಮುಖ್ಯ ಮಾರ್ಗ ಸಂಪರ್ಕ. ಇವುಗಳಿಂದ ಪಕ್ಕದ ಕೊಡಗು ಜಿಲ್ಲೆಯೊಂದಿಗೆ ವ್ಯಾಪಾರ ವ್ಯವಹಾರ ನಡೆಯುವುದು. 

	ಸುಳ್ಯದ ಈಶಾನ್ಯಕ್ಕೆ 34 ಕಿಮೀ ದೂರದಲ್ಲಿರುವ ಬಳಪಗ್ರಾಮ ವಿಜಯನಗರದ ಕಾಲದಲ್ಲಿ ಕೆಲವು ನಾಯಕರ ಆಡಳಿತ ಕೇಂದ್ರವಾಗಿತ್ತು. ಇಲ್ಲಿ ಸ್ವಲ್ಪಭಾಗ ಹಾಳಾಗಿರುವ ತ್ರಿಶೂಲಿನಿ ದೇವಾಲಯವಿದೆ. ಸುಳ್ಯದ ಉತ್ತರಕ್ಕೆ 19 ಕಿಮೀ ದೂರದಲ್ಲಿರುವ ಬೆಳ್ಳಾರೆ ಒಂದು ವ್ಯಾಪಾರ ಕೇಂದ್ರ. ಇದು ಬಲ್ಲಾಳ ವಂಶಸ್ಥರ ಗ್ರಾಮವಾಗಿದ್ದು ಇಲ್ಲಿ ಅವರು ಅರಮನೆ ಮತ್ತು ಬಸದಿಯನ್ನು ಕಟ್ಟಿಸಿದ್ದರು. ಇಕ್ಕೇರಿಯ ವೆಂಕಟಪ್ಪನಾಯಕ ಇಲ್ಲಿ ಒಂದು ಕೋಟೆ ಕಟ್ಟಿಸಿದ್ದ. 1775ರಲ್ಲಿ ಟಿಪ್ಪುವಿನ ವಶವಾಗಿದ್ದು ಮತ್ತೆ 1799ರಲ್ಲಿ ಕೊಡಗಿನ ರಾಜರಿಗೆ ಸೇರಿತು. 1834ರಲ್ಲಿ ಈ ಪ್ರದೇಶವೆಲ್ಲ ಕೊಡಗಿನ ಜೊತೆ ಬ್ರಿಟಿಷರಿಗೆ ಸೇರಿಹೋಯಿತು. ಸುಳ್ಯದ ಈಶಾನ್ಯಕ್ಕೆ 44 ಕಿಮೀ ದೂರದಲ್ಲಿರುವ ಸುಬ್ರಹ್ಮಣ್ಯ ಒಂದು ಪುಣ್ಯಕ್ಷೇತ್ರ. ಕುಮಾರ ಮತ್ತು ಶೇಷ ಪರ್ವತಗಳ ಮಧ್ಯೆ ಇರುವ ಇದನ್ನು ಕುಕ್ಕೆ ಸುಬ್ರಹ್ಮಣ್ಯ, ಪುಷ್ಪಗಿರಿ ಎಂದೂ ಕರೆಯುತ್ತಾರೆ. ಮಳೆಗಾಲದಲ್ಲಿ ಹೋಗಲಾಗದ ಈ ಗ್ರಾಮಕ್ಕೆ ತಾಲ್ಲೂಕಿನ ಎಲ್ಲ ಕಡೆಯಿಂದಲೂ ಮಾರ್ಗವಿದೆ. ಇಲ್ಲಿನ ಸುಬ್ರಹ್ಮಣ್ಯ ದೇವಾಲಯ ಮತ್ತು ಪ್ರತಿವರ್ಷ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಜರಗುವ ಜಾತ್ರೆ ಬಹು ಪ್ರಸಿದ್ಧ.	
 *
	ಸುಳ್ಯ ಈ ತಾಲ್ಲೂಕು ಆಡಳಿತ ಕೇಂದ್ರ. ಸಂಪಾಜೆ-ಪುತ್ತೂರು ಹೆದ್ದಾರಿಯಲ್ಲಿ ಮಂಗಳೂರಿನ ಆಗ್ನೇಯಕ್ಕೆ 86 ಕಿಮೀ ದೂರದಲ್ಲೂ ಪುತ್ತೂರಿನ ಆಗ್ನೇಯಕ್ಕೆ 35 ಕಿಮೀ ದೂರದಲ್ಲೂ ಇದೆ. ಜನಸಂಖ್ಯೆ 18,026.

	ಇದೊಂದು ಮುಖ್ಯ ವ್ಯಾಪಾರ ಕೇಂದ್ರ. ಶ್ರೀಲಂಕಾದಿಂದ ಬಂದ ನಿರಾಶ್ರಿತರಿಗೆ ವಸತಿಯನ್ನೊದಗಿಸಿದ್ದಲ್ಲದೆ ಇಲ್ಲಿ ರಬ್ಬರ್ ತೋಟಗಳನ್ನು ಬೆಳೆಸಿ ಅವರಿಗೆ ಉದ್ಯೋಗವನ್ನೂ ಒದಗಿಸಲಾಗಿದೆ. ರಬ್ಬರ್ ತೋಟಗಳ ಬೆಳೆವಣಿಗೆ, ವಿಸ್ತರಣೆಯೊಂದಿಗೆ ಸುಳ್ಯ ಅಭಿವೃದ್ಧಿಯಾಗುತ್ತಿದೆ.								
		(ಡಿ.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ